ಡಿ . ವಿ . ಗುಂಡಪ್ಪ(ಡಿ ವಿ ಜಿ ).

( ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ )

  • ಹುಟ್ಟಿದ ದಿನಾಂಕ :- '೧೭.೦೩.೧೮೮೭', ಮುಳಬಾಗಿಲು, ಕೋಲಾರ ಜಿಲ್ಲೆ .
  • ಮರಣ ದಿನಾಂಕ :- '೦೭.೧೦.೧೯೭೫', ಬೆಂಗಳೂರು
  • ಜನಪ್ರಿಯ ಕೃತಿ :- ಮಂಕುತಿಮ್ಮನ ಕಗ್ಗ.
  • ಪತ್ನಿ :- ಭಾಗೀರಥಮ್ಮ .
  • ಹವ್ಯಾಸ :- ತತ್ವಜ್ಞಾನಿ, ಕವಿತೆ, ಸಾಹಿತಿ, ಪತ್ರಕರ್ತ.

‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರು ಹುಟ್ಟಿದ್ದು ಮುಳಬಾಗಿಲಿನಲ್ಲಿ. ತಂದೆ ದೇವನಹಳ್ಳಿ ವೆಂಕಟರಮಣಯ್ಯ, ತಾಯಿ ಅಲಮೇಲು. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ಷಣ. ಕೆ.ವಿ.ರಾಮಸ್ವಾಮಿ ಅಯ್ಯರ್‌ಎಂಬುವರಿಂದ ಇಂಗ್ಲಿಷ್ ಪಾಠ. ಸಂಜೆ ಮನೆಯಲ್ಲಿ ROBINSON CRUSOE, SWISS FAMILY ROBINSON, STANFORD AND METRON ಮುಂತಾದ ಬಾಲ ಸಾಹಿತ್ಯದ ಹೆಚ್ಚುವರಿ ಓದು ಮತ್ತು ಸಂಸ್ಕೃತಾಭ್ಯಾಸ. ಇವರ ಚಿಕ್ಕ ತಾತಂದಿರು ಶ್ರೀ ಕೃಷ್ಣರಾಜ ವಾಣಿವಿಲಾಸ, ಕನ್ನಡ ವಚನ ಭಾರತ, ಶ್ರೀ ಜಯಚಾಮರಾಜೇಂದ್ರ ವಿಲಾಸ, ಕನ್ನಡ ರಾಮಾಯಣ ಗ್ರಂಥಗಳನ್ನು ಓದಿಸುತ್ತಿದ್ದರು. ಇದರಿಂದ ಬಾಲ್ಯದಲ್ಲಿಯೇ ಹಳಗನ್ನಡ ಸಾಹಿತ್ಯದ ಪರಿಚಯವಾಗತೊಡಗಿತು. ಮನೆಯ ಅಕ್ಕಪಕ್ಕ ನಡೆಯುತ್ತಿದ್ದ ಸಂಗೀತ, ನರ್ತನ ಕಾರ್ಯಕ್ರಮಗಳಿಂದ ಬೆಳೆದ ಕಲಾಭಿರುಚಿ.

ಎಲ್.ಎಸ್.ಪಾಸಾದ ನಂತರ ಹೈಸ್ಕೂಲಿಗೆ ಸೇರಿದ್ದು ಮೈಸೂರಿನ ಮಹಾರಾಜ ಕಾಲೇಜಿಗೆ ಒಳಪಟ್ಟಿದ್ದ ಹೈಸ್ಕೂಲಲ್ಲಾದರೂ ಅಜ್ಜಿ ತಾತನ ಸಾವಿನಿಂದ ಊರಿಗೆ ಬಂದವರು ಪುನಃ ಮೈಸೂರಿಗೆ ಹೋಗಲಿಲ್ಲ. ನಂತರ ಸೇರಿದ್ದು ಕೋಲಾರದ ಹೈಸ್ಕೂಲಿಗೆ. ಚರಿತ್ರೆಪಾಠ ಮಾಡುವ ಕೃಷ್ಣಸ್ವಾಮಿ ಅಯ್ಯರ್‌ರವರು ಲಾರ್ಡ್‌‌ಮಾರ್ಲೆ ಎಂಬಾತ ಬರೆದಿರುವ ಗ್ಲಾಡ್‌ಸ್ಟನ್‌ನ ಜೀವನ ಚರಿತ್ರೆ ಓದಲು ತಿಳಿಸಿದಾಗ ಇವರಲ್ಲಿದ್ದ ಜ್ಞಾನದ ಕಿಡಿ ಹೊತ್ತಿಸಿದಂತಾಯಿತು. ನಂತರ ಕ್ರೈಸ್ತ ಸಂಸ್ಥೆಯೊಂದಕ್ಕೆ ಕೆಲ ತರ್ಜುಮೆ ಕೆಲಸ ಮಾಡಿ, ಸಂಪಾದಿಸಿದ ಹಣದಿಂದ ಕೊಂಡು ಓದಿದ್ದು ಟೆನಿಸನ್, ಲಾಂಗ್‌ಫೆಲೊ, ಮ್ಯಾಕ್ಸ್‌ಮುಲ್ಲರ್, ಡಾಯ್‌ಸನ್ ಮುಂತಾದವರ ಕೃತಿಗಳು. ಆದರೆ ಪಠ್ಯದಲ್ಲಿ ಹಿಂದೆಬಿದ್ದು ಮೆಟ್ರಿಕ್ಯುಲೇಷನ್‌ನಪಾಸು.

ಅಷ್ಟರಲ್ಲಿ ಸಂಸಾರದ ಹೊರೆ ತಲೆಯ ಮೇಲೆ ಬಿದ್ದಿದ್ದರಿಂದ ಉದ್ಯೋಗವನ್ನು ಹುಡುಕುವುದು ಅನಿವಾರ್ಯವಾಯಿತು. ಚಾಂಪಿಯನ್ ರೀಫ್‌ನ ಇಸ್ಮಾಯಿಲ್ ಸೇಟರ್ ಅಂಗಡಿಯಲ್ಲಿ. ಮುಳಬಾಗಿಲು ಶಾಲೆಯ ಬದಲಿ ಉಪಾಧ್ಯಾಯರಾಗಿ ನಂತರ ಬಂದುದು ಬೆಂಗಳೂರಿಗೆ- ನೌಕರಿಗಾಗಿ. ತಾವು ಎಂದೂ ಆಶಿಸದ ಪತ್ರಿಕೋದ್ಯಮವನ್ನು ಅನಿವಾರ್ಯವಾಗಿ ೧೯೦೭ ರಲ್ಲಿ ಪ್ರವೇಶಿಸಿದರು. ಸೂರ‍್ಯೋದಯ ಪ್ರಕಾಶಿಕ, ಮೈಸೂರು ಸ್ಟ್ಯಾಂಡರ್ಡ್‌, ಈವಿನಿಂಗ್ ಮೆಯಿಲ್, ಮೈಸೂರು ಟೈಂಸ್ ಮುಂತಾದ ಪತ್ರಿಕೆಗಳಲ್ಲಿ ಕೆಲಕಾಲ ಉದ್ಯೋಗ. ೧೯೦೮ ರಲ್ಲಿ ಪತ್ರಿಕಾ ದಿಗ್ಭಂಧನ ವಿಧಿಸಿದ್ದರಿಂದ ಮದರಾಸಿಗೆ ಹೋಗಿ ಇಂಡಿಯನ್ ಪೇಟ್ರಿಯಟ್‌ ಮುಂತಾದ ಪತ್ರಿಕೆಗಳಿಗೆ ಬರೆದ ಲೇಖನಗಳು. ಬೆಂಗಳೂರಿಗೆ ಹಿಂದಿರುಗಿ ಕನ್ನಡ ಪತ್ರಿಕೆ ‘ಭಾರತಿ’ಯ ಸಹಸಂಪಾದಕತ್ವ. ೧೯೧೨ ರಲ್ಲಿ ಬೆಂಗಳೂರು ನಗರ ಸಭೆಯ ಸದಸ್ಯರಾಗಿ ನಾಮಕಾರಣ. ೧೯೧೩ ರಲ್ಲಿ ಅರ್ಧ ವಾರಪತ್ರಿಕೆ ‘ಕರ್ನಾಟಕ’ ಆರಂಭ. ನಂತರ ಹೊರ ತಂದ ಪತ್ರಿಕೆ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್‌. ೧೯೨೩ ರಲ್ಲಿ ಹೊರತಂದ ಪತ್ರಿಕೆ ‘ಕರ್ನಾಟಕ ಜನಜೀವನ ಮತ್ತು ಅರ್ಥ ಸಾಧಕ’. ಹೀಗೆ ಅಂದಿನ ರಾಜಕೀಯ ವಿದ್ಯಮಾನಗಳ ಕುರಿತು ಸತತವಾಗಿ ಪತ್ರಿಕೆಗಳಿಗೆ ಬರೆಯತೊಡಗಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ವಿಷಯಗಳು, ಜೀವನ ಚರಿತ್ರೆಗಳಾದ ದಿವಾನ್ ರಂಗಾ ಚಾರ್ಲು (೧೯೧೧), ಗೋಪಾಲಕೃಷ್ಣ ಗೋಖಲೆ (೧೯೧೫), ಸರ್‌.ಕೆ. ಶೇಷಾದ್ರಿ ಅಯ್ಯರ್ (೧೯೧೬), ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು (೧೯೧೭), ಟಾಲ್‌ಸ್ಟಾಯ್ (೧೯೧೭) ಮುಂತಾದ ಕೃತಿಗಳನ್ನು ರಚಿಸಿದರು.

ಸನ್ಮಾನಗಳನ್ನು ದೂರವಿರಿಸಿದ ಡಿ.ವಿ.ಜಿ.ಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳೂ ಹಲವಾರು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೧೯೬೧), ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೬೭), ನಾಗರಿಕದಿಂದ ಸನ್ಮಾನ ಹಾಗೂ ನಿಧಿಸಮರ್ಪಣೆ (೧೯೭೦).

ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದ ಡಿ.ವಿ.ಜಿ.ಯವರು ಈ ಎಲ್ಲ ರಂಗಗಳಿಂದಲೂ ನಿರ್ಗಮಿಸಿದ್ದು ೧೯೭೫ರ ಅಕ್ಟೋಬರ್ ೭ ರಂದು.

ಇದೇ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ವಿಷಯಗಳು, ಜೀವನ ಚರಿತ್ರೆಗಳಾದ ದಿವಾನ್ ರಂಗಾ ಚಾರ್ಲು (೧೯೧೧), ಗೋಪಾಲಕೃಷ್ಣ ಗೋಖಲೆ (೧೯೧೫), ಸರ್‌.ಕೆ. ಶೇಷಾದ್ರಿ ಅಯ್ಯರ್ (೧೯೧೬), ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು (೧೯೧೭), ಟಾಲ್‌ಸ್ಟಾಯ್ (೧೯೧೭) ಮುಂತಾದ ಕೃತಿಗಳನ್ನು ರಚಿಸಿದರು.

ಇವರ ರಾಜಕೀಯ ವಿಶ್ಲೇಷಣೆ, ವರದಿಗಳಿಂದ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯರಾಗಿಯೂ (೧೯೨೬-೪೦) ಸೇವೆ ಸಲ್ಲಿಸಿದರು.

  • ಕವಿತೆ
  • ನಿವೇದನ
  • ಉಮರನ ಒಸಗೆ
  • ಮಂಕುತಿಮ್ಮನ ಕಗ್ಗ
  • ಮರುಳ ಮುನಿಯನ ಕಗ್ಗ
  • ಶ್ರೀರಾಮ ಪರೀಕ್ಷಣಂ
  • ಅಂತಃಪುರಗೀತೆ
  • ಗೀತಾ ಶಕುಂತಲ
  • ಜೀವನ ಸೌಂದರ್ಯ ಮತ್ತು ಸಾಹಿತ್ಯ
  • ಸಾಹಿತ್ಯ ಶಕ್ತಿ
  • ಸಂಸ್ಕೃತಿ
  • ಬಾಳಿಗೊಂದು ನಂಬಿಕೆ
  • ಜ್ಞಾಪಕ ಚಿತ್ರಶಾಲ
  • ವಿದ್ಯಾರಣ್ಯ ವಿಜಯ
  • ಜಾಕ್ ರೆಡ್
  • ಮ್ಯಾಕ್ ಬೆತ್
  • ಪುರುಷಸೂಕ್ತ
  • ದೇವರು
  • ಋತು ಸತ್ಯ ಮತ್ತು ಧರ್ಮ
  • ಜೀವನ ಸೌಂದರ್ಯ ಮತ್ತು ಸಾಹಿತ್ಯ